ಆಧ್ಯಾತ್ಮಿಕ ಸಭೆಗಳಲ್ಲಿ (#9479)

*(ಸಮಾಲೋಚನಾ ಸಭೆಯನ್ನು ಪ್ರವೇಶಿಸಿದಾಗಲೆಲ್ಲಾ ಭಗವಂತನಲ್ಲಿ ತಲ್ಲೀನರಾಗಿ, ಅವನ ಪ್ರೀತಿಗೆ ಪಾತ್ರರಾಗಿ, ಈ ಪ್ರಾರ್ಥನೆಯನ್ನು ಸಲ್ಲಿಸಿ)
ಓ ದೇವರೇ, ನನ್ನ ದೇವರೇ! ನಿನ್ನಲ್ಲಿ ಭಕ್ತಿಪರವಶರಾಗಿ ನಿನ್ನತ್ತ ನಿರೀಕ್ಷಿಸುವ ನಿನ್ನ ಸೇವಕರು ನಾವು.  ಈ ಮಹಾದಿನದಲ್ಲಿ ನಿನ್ನನ್ನು ಮಾತ್ರ ಬಿಟ್ಟು ಮಿಕ್ಕೆಲ್ಲದರಿಂದಲೂ ಅಲಿಪ್ತರಾಗಿದ್ದೇವೆ.  ನಮ್ಮ ಅಭಿಪ್ರಾಯಗಳಲ್ಲಿ, ಭಾವನೆಗಳಲ್ಲಿ ಒಮ್ಮತಗೊಂಡು.  ಈ ಆಧ್ಯಾತ್ಮಿಕ ಸಭೆಯಲ್ಲಿ ಸೇರಿದ್ದೇವೆ.  ಮಾನವ ಪ್ರಪಂಚದಲ್ಲಿ ನಿನ್ನ ಉಪದೇಶವನ್ನು ಉನ್ನತ ಮಟ್ಟದಲ್ಲಿರಿಸಲು ಏಕಮುಖ ಉದ್ದಿಶ್ಯದಿಂದ ಕೂಡಿದ್ದೇವೆ.  ಓ ಪ್ರಭುವೇ, ಭಗವಂತನೇ, ನಮ್ಮನ್ನು  ದೈವಿಕ ಮಾರ್ಗದರ್ಶಕತ್ವದ ಚಿಹ್ನೆಯನ್ನಾಗಿಸು.  ಮಾನವರಲ್ಲಿ ನಿನ್ನ ಶ್ರೇಷ್ಠ ಧರ್ಮದ ಪ್ರಮಾಣಕರ್ತರನ್ನಾಗಿ ಅನುಗೊಳಿಸು.  ಶಕ್ತಿಯುತವಾದ ನಿನ್ನ ನಿರ್ಧಾರದ ಪ್ರಸಾರದಲ್ಲಿ ನಿನ್ನ ಸೇವಕರನ್ನಾಗಿ ಮಾಡು.  ಮಹಿಮಾವಂತ ಸ್ವಾಮಿಯೇ, ನಿನ್ನ ಆಭಾ ಸಾಮ್ರಾಜ್ಯದಲ್ಲಿ ದೈವಿಕ ಏಕತೆಯ ಸಾಕ್ಷಾತ್ಕರನೂ ನೀನು.  ಎಲ್ಲ ಪ್ರದೇಶಗಳ ಮೇಲು ಬೆಳಗುತ್ತಿರುವ ನಕ್ಷತ್ರನೂ ಹೌದು.  ನಿನ್ನ ಅಸಾಧಾರಣವಾದ ಘನತೆಯ ಅಲೆಗಳಿಂದ ನಾವು ಸಾಗರದಂತಾಗಲು ಸಹಾಯ ಮಾಡು.  ನಿನ್ನ ಮಹಿಮೆಯ ಶಿಖರದಿಂದ ಹರಿದು ಬರುವ ಹೊಳೆಯಂತೆಯೂ ಮಾಡು.  ನಿನ್ನ ಸ್ವರ್ಗ ತೇಜಃಪುಂಜವಾದ ಉದ್ದಿಶ್ಯದ ಮರದಲ್ಲಿ ಬೆಳೆವ ಉತ್ತಮ ಹಣ್ಣುಗಳಂತೆ ಏರ್ಪಡಿಸು.  ಓ ಪರಮಾತ್ಮನೇ, ನಿನ್ನ ದೈವಿಕ ಏಕತೆಯ ಮಾತುಗಳ ಆಧಾರದ ಮೇಲೆ ನಮ್ಮ ಆತ್ಮಗಳು ನಿಲ್ಲುವಂತೆ ನೋಡು.  ನಿನ್ನ ದಯಾಮಯವಾದ ಭಾವನೆಗಳಿಂದ ನಮ್ಮ ಹೃದಯಗಳು ಸಂತಸಗೊಳ್ಳುವಂತೆ ಮಾಡು.  ಇದರಿಂದ ಒಂದೇ ಸಾಗರದ ಅಲೆಗಳಂತಾದರೂ ನಾವು ಐಕ್ಯವಂತರಾಗಿ ನಿನ್ನ ಪ್ರಕಾಶದ ಜ್ಯೋತಿಯ ಕಿರಣಗಳೋಪಾದಿಯಲ್ಲಿ ಒತ್ತಟ್ಟಿಗೆ ಮಿಲನವಾಗಲಿ.  ನಮ್ಮ ಭಾವನೆಗಳು, ನಮ್ಮ ಅಭಿಪ್ರಾಯಗಳು, ನಮ್ಮ ಅಂತರಂಗ ಇವೆಲ್ಲ ಒಂದು ವಾಸ್ತವಿಕ ಸ್ಥಿತಿಯಾಗಲಿ, ಇಡೀ ಪ್ರಪಂಚದಲ್ಲಿ ಐಕ್ಯತೆಯ ಭಾವದ ಪ್ರತಿಬಿಂಬವಾಗಲಿ ನೀನು ಘನವಂತ, ದಯಾಮಯ, ದಾತ, ಸರ್ವಶಕ್ತ, ಕರುಣಾಶಾಲಿ, ಅಷ್ಟೇ ಅಲ್ಲ, ಕರುಣಾಳು.

-`Abdu'l-Bahá
-----------------------

ಆಧ್ಯಾತ್ಮಿಕ ಸಭೆಗಳಲ್ಲಿ (#9480)

*(ಅಧ್ಯಾತ್ಮಿಕ ಸಭೆ ಮುಕ್ತಾಯಗೊಳ್ಳುವ ಸಮಯದಲ್ಲಿ ಮಾಡತಕ್ಕ ಪ್ರಾರ್ಥನೆ ಹೀಗೆ)
ಓ ದೇವರೇ! ಓ ದೇವರೇ! ನಿನ್ನಲ್ಲಿ ವಿಶ್ವಾಸವನ್ನಿಟ್ಟು, ನಿನ್ನ ಸೂಚನೆಗಳನ್ನು ನಂಬಿ, ನಿನ್ನ ಉಪದೇಶಗಳಲ್ಲಿ ದೃಢತೆ ತೋರಿ, ನಿನ್ನತ್ತ ಆಕರ್ಷಕರಾಗಿ, ನಿನ್ನ ಪ್ರೀತಿಯ ಜ್ವಾಲೆಯ ಬೆಳಕಿನಿಂದ ತೃಪ್ತರಾಗಿ, ನಿನ್ನ ಕಾರ್ಯದಲ್ಲಿ ಪ್ರಾಮಾಣಿಕ ಭಾವನೆಯುಳ್ಳವರಾಗಿ, ನಿನ್ನ ಶ್ರದ್ಧಾಸಕ್ತಿಯ ಸೇವಕರಾಗಿ, ನಿನ್ನ ಧಾರ್ಮಿಕ ತತ್ವಗಳನ್ನು ಪ್ರಚಾರಗೊಳಿಸಲು ಸನ್ನದ್ಧರಾಗಿ, ನಿನ್ನ ಮೂರ್ತಿಯ ಆರಾಧಕರಾಗಿ, ಪ್ರೀತಿ ತೋರಿಸುವವರಲ್ಲಿ ನಮ್ರರಾಗಿ, ಅವಿಚ್ಚಿನ್ನ ಭಕ್ತರಾಗಿ, ನಿನ್ನ ಅಭಿಮಾನಕ್ಕೆ ಪಾತ್ರರಾದವರ ಸೇವೆ ಸಲ್ಲಿಸಲು ಕಾತುರರಾಗಿ ಇರುವ ಈ ಸಭೆಯವರತ್ತ ನಿನ್ನ ಕೃಪಾಕಟಕ್ಷ ಬೀರುವವನಾಗು. ಅಗೋಚರರಾದ ನಿನ್ನ ಬೆಂಬಲಕಾರರೊಡನೆ ನಮಗೆ ನೆರವಾಗು.  ನಿನ್ನ ಸೇವೆಗೋಸ್ಕರ ನಮ್ಮ ದೇಹದಲ್ಲಿ ಶಕ್ತಿಯನ್ನು ಬಲಪಡಿಸು. ನಿನಗೆ ಶರಣಾಗುವ ಹಾಗೂ ಪೂಜಿಸುವ ಸೇವಕರನ್ನಾಗಿ ಮಾಡು.  ನಿನ್ನೊಡನೆ ಸಂಭಾಷಣೆ ನಡೆಸುವಂತೆ ಒಲಿಸು.
ಓ ನಮ್ಮ ಪ್ರಭುವೇ! ನಾವು ದುರ್ಬಲರು, ನೀನಾದರೋ ಪರಮಶಕ್ತ, ಬಲಾಢ್ಯ, ನಾವು ಮಾನವರು ನೀನಾದರೋ ಜೀವಗೊಳಿಸುವ ಮಹಾನ್ ವ್ಯಕ್ತಿ ನಾವು ಬೇಡುವವರು, ನೀನು ಕಾಪಾಡುವವ ಹಾಗೂ ಪ್ರಭಾವಶಾಲಿ. ಓ ನಮ್ಮ ಪ್ರಭುವೇ! ನಿನ್ನ ದಿವ್ಯ ಮುಖಾರವಿಂದದ ಕಡೆಗೆ ನಮ್ಮ ದೃಷ್ಟಿ ಹೊರಳುವಂತೆ ಕೃಪೆ ಮಾಡು.  ದೈವದತ್ತ ಸಹಾಯದಿಂದ ಅನ್ನ ನೀಡು. ನಿನ್ನ ಉನ್ನತ ದೇವದೂತರ ಮೂಲಕ ಸಹಾಯವೆಸಗು.  ಅಭಾ ಸಾಮ್ರಾಜ್ಯದ ಪವಿತ್ರಾತ್ಮಗಳಿಂದ ನಮ್ಮನ್ನು ಸ್ಥಿರಗೊಳಿಸು.  ನಿಜಕ್ಕೂ ನೀನು ದಯಾನಿಧಿ, ಕರುಣಾಕರ, ಅತ್ಯಂತ ಉದಾರಿ, ಕ್ಷಮೆ ನೀಡುವವ ಹಾಗೂ ಮಹಿಮಾನ್ವಿತ.

-`Abdu'l-Bahá
-----------------------

